ಗುರುವಾರ, ಮೇ 24, 2012

ವ್ಯಾಟ್ ಮನ್ನಾ ಮಾಡಿ





ಜಾಗತಿಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿದಿದೆ ಎಂದು ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು ರೂ. 7.54 ರಷ್ಟು ಅತೀವವಾಗಿ ಹೆಚ್ಚಿಸಿದೆ. ಪ್ರಸ್ತುತ ವರ್ಷದಲ್ಲಿ ಸುಮಾರು 8-9 ಬಾರಿ ಪೆಟ್ರೋಲ್ ದರ ಏರಿಸುವ ಮೂಲಕ  ಜನಸಾಮಾನ್ಯರ ಮತ್ತು ಬಡವರ ಮೇಲೆ ಗಾಯದ ಬರೆ ಎಳೆದಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜೀವನವೇ ದುಸ್ತರವಾಗಿರೋ ಈ ದಿನಗಳಲ್ಲಿ ಕೇಂದ್ರ ಸರ್ಕಾರದ ಈ ಕ್ರಮ ಇನ್ನಷ್ಟು ಪೆಟ್ಟು ನೀಡಿದೆ. ದೇಶದಲ್ಲಿ ಪೆಟ್ರೋಲ್ ಮೇಲೆ ಅತೀ ಹೆಚ್ಚು ಮೌಲ್ಯವರ್ಧಿತ ತೆರಿಗೆ ವಿಧಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಅಂದರೆ ಪೆಟ್ರೋಲ್ ಮೇಲೆ ಶೇ. 30 ರಷ್ಟು ವ್ಯಾಟ್ ರಾಜ್ಯದ ಜನ ಭರಿಸುತ್ತಿದ್ದಾರೆ. ರಾಜಸ್ತಾನ ಸರ್ಕಾರವು 2012-13 ಸಾಲಿನ ಬಜೆಟ್ ನಲ್ಲಿ  ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು  ಶೇ. 2 ರಷ್ಟು  ಕಡಿತಗೊಳಿಸುವುದಾಗಿ ಘೋಷಿಸಿದೆ.ಗೋವಾ ಮತ್ತು ದೆಹಲಿ ಸರ್ಕಾರಗಳು ಪೆಟ್ರೋಲ್ ಮೇಲಿನ ತೆರಿಗೆಯನ್ನು ಪೂರ್ಣ ಹಿಂಪಡೆದಿವೆ.  ಗೋವಾ ಮತ್ತು ದೆಹಲಿ ಸರಕಾರಗಳಂತೆ ಇತರೆ ರಾಜ್ಯಗಳು ಕ್ರಮ ಕೈಗೊಂಡಲ್ಲಿ ಲೀಟರ್ ಪೆಟ್ರೋಲ್ ಗೆ 15-20 ರೂ.ಗಳ ಜನಸಾಮಾನ್ಯರ ಮೇಲಿನ ಹೊರೆಯನ್ನು ಕಡಿಮೆಗೊಳಿಸಬಹುದೆಂದು ಹಣಕಾಸಿನ ಸಚಿವರಾದ ಪ್ರಣಬ್ ಮುಖರ್ಜಿಯವರು ತಿಳಿಸಿದ್ದಾರೆ.  ಜನಪರ ಸರ್ಕಾರ ಅಂತೆಲ್ಲ ಬೊಬ್ಬೆ ಹಾಕುವ ಸರ್ಕಾರಗಳು ಈ ಕುರಿತು ಯೋಚಿಸಿ ಕೂಡಲೇ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಪೂರ್ಣ ಮನ್ನಾ ಮಾಡಬೇಕಿದೆ. ಆ ಮೂಲಕ ಬಡವರ ಮತ್ತು ಜನಸಾಮಾನ್ಯರ ಹಿತ ಕಾಪಾಡಬೇಕಿದೆ.


ರಾಜೇಂದ್ರ ಹುನಗುಂದ.
ಕೊಪ್ಪಳ.

ಬುಧವಾರ, ಮೇ 16, 2012

ಡಬ್ಬಿಂಗ್ ಮಾಡಲು ಬಿಡಿ


  ತಮಿಳು, ತೆಲುಗು ಚಿತ್ರರಂಗದವರು ರಂಜನೀಯ ಮತ್ತು ಪರಿಣಾಮಕಾರಿಯಾದ ಯಾವುದೇ ಭಾಷೆಯ ಚಿತ್ರಗಳನ್ನು ಡಬ್ಬಿಂಗ್ ಮಾಡಿ ಪ್ರೇಕ್ಷಕರಿಗೆ ನೀಡುತ್ತಾರೆ. ತನ್ಮೂಲಕ ಚಿತ್ರರಂಗದ ಹಲವಾರು ಕಾರ್ಮಿಕರಿಗೆ ಕೆಲಸ ಸಿಕ್ಕಿದೆ.  ಅರ್ಥವಾಗದ ಇತರೆ ಭಾಷೆಯ ಕಲಾತ್ಮಕ ಚಿತ್ರಗಳನ್ನು ಡಬ್ಬಿಂಗ್ ಮೂಲಕ ತಮ್ಮ ಮಾತೃ ಭಾಷೆಯಲ್ಲಿ ನೋಡುವಂತಾದರೆ ತಪ್ಪೇನು ? ಎಲ್ಲಾ ಭಾಷೆಯ ಉತ್ತಮ ಚಿತ್ರಗಳನ್ನು ನೋಡುವಂತಾದಾಗ ಇನ್ನಷ್ಟು ನುರಿತ ನಿರ್ದೇಶಕರು, ನಿರ್ಮಾಪಕರು ಬೆಳಕಿಗೆ ಬರಲು, ಇನ್ನಷ್ಟು ಒಳ್ಳೆಯ ಚಿತ್ರಗಳು ಬೆಳ್ಳಿತೆರೆಗೆ ಬರಲು ಸಹಾಯಕವಾಗಬಹುದು. ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ಪ್ರವೃತ್ತಿ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಈ ಕಾರಣದಿಂದಲೇ ಇಂದು ತಮಿಳು, ತೆಲುಗು ಚಿತ್ರರಂಗಗಳು ಬೃಹತ್ ಉಧ್ಯಮಗಳಾಗಿ ಬೆಳೆದಿವೆ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿಲ್ಲವೆಂಬ ಕೊರಗಿದೆ. ಬಂದ ಬೆರಳೆಣಿಕೆಯ ಯಶಸ್ವಿ ಚಿತ್ರಗಳಲ್ಲಿ ಎಲ್ಲ ಕಾರ್ಮಿಕರಿಗೂ ಕೆಲಸವಿಲ್ಲ.  ಕೆಲವೇ ವ್ಯಕ್ತಿಗಳ ಅತಾರ್ಕಿಕ ಕ್ರಮದಿಂದ ಪ್ರೇಕ್ಷಕರನ್ನು ಡಬ್ಭಿಂಗ್ ಚಿತ್ರಗಳ ವೀಕ್ಷಣೆಯಿಂದ ವಂಚಿತರನ್ನಾಗಿಸುವುದು ಯಾವ ನ್ಯಾಯ. ?  ಕನ್ನಡ ಭಾಷೆಯ ಸಿನಿಮಾಸಕ್ತರು ಬಾವಿಯೊಳಗಿನ ಕಪ್ಪೆಗಳಾಗಬೇಕೆ ?  ಕನ್ನಡಿಗರು ಸಹ ಬೇರೆ ಭಾಷೆಯ ಚಿತ್ರಗಳನ್ನು ಮಾತೃ ಭಾಷೆಯಲ್ಲಿಯೇ ನೋಡುವಂತಾಗಲಿ. ಇದರತ್ತ ಕನ್ನಡ ಚಿತ್ರರಂಗದ ಬುದ್ಧಿಜೀವಿಗಳು ಯೋಚಿಸಬೇಕು.   



ರಾಜೇಂದ್ರ ಹುನಗುಂದ,
ಕೊಪ್ಪಳ.


ಶನಿವಾರ, ಫೆಬ್ರವರಿ 25, 2012

ಮರೆತ ಅಭಿವೃದ್ಧಿ ಮಂತ್ರ



ಪ್ರಸಕ್ತ ಬಿಜೆಪಿ ಸರ್ಕಾರದ ಸ್ಥಿತಿ ಅವಲೋಕಿಸಿದರೆ ರಾಜ್ಯದ ನಾಯಕರು ಅಭಿವೃದ್ಧಿಯನ್ನು ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ. ನೆರೆ ರಾಜ್ಯಗಳು ಪೈಪೋಟಿಗಿಳಿದು ಅಭಿವೃದ್ಧಿಯ ಮಂತ್ರ ಜಪಿಸುತ್ತಿದರೆ ನಮ್ಮ ನಾಯಕರು ವೃಥಾ ಪರರ ಧೂಷಣೆಯಲ್ಲಿ ತೊಡಗಿದ್ದಾರೆ. ಸ್ವ-ಸ್ಥಾನಮಾನಕ್ಕಾಗಿ ಅವರವರಲ್ಲಿ ಕಿತ್ತಾಟ ನಡೀತಿದೆ. ಪ್ರಗತಿಪೂರಿತ ಯೋಜನೆಗಳು ಶೂನ್ಯವಾಗಿವೆ. ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆಯೆಂತಲೇ ಹೇಳಬೇಕು. ಸಚಿವರ ವಿಶಿಷ್ಟ ಹಗರಣಗಳಿಂದ ರಾಜ್ಯದ ವರ್ಚಸ್ಸು ಭೂಮಟ್ಟಕ್ಕೆ ಕುಸಿಯುತ್ತಿದೆ. ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸುವ ನಾವು ಒಂದೊಮ್ಮೆ ಯೋಚಿಸುವ ಕಾಲ ಬಂದಿದೆ. ಈ ನಡುವೆ ಸಾಮರಸ್ಯ ತರಲು ಹೈಕಮಾಂಡ್ ನಡೆಸುತ್ತಿರುವ ಕಸರತ್ತು ಕೂಡ ಪುಕ್ಕಟೆ ಮನರಂಜನೆಯೇ ಸರಿ. ರಾಜ್ಯದ ನಾಯಕರು ತಮ್ಮೆಲ್ಲ ಸ್ವ-ಪ್ರತಿಷ್ಠೆ ಬಿಟ್ಟು ಆರಿಸಿ ಕಳಿಸಿದ ಜನತೆಗೆ ಕಿಂಚಿತ್ತಾದರೂ ಕೆಲಸ ಮಾಡುವಂತಾಗಬೇಕು. ರಾಜ್ಯಕ್ಕೆ ಕೊಚ್ಚಾಟದ ನಾಯಕತ್ವ ಮುಖ್ಯ ಅಲ್ಲ, ಸಾಮೂಹಿಕ ಆಡಳಿತ ಮುಖ್ಯ. ಇನ್ನಾದರೂ ನಮ್ಮ ರಾಜಕಾರಣಿಗಳು ರಾಜ್ಯದ ಒಳಿತಿಗಾಗಿ ಶ್ರಮಿಸುವರೆ ಕಾದುನೋಡಬೇಕು.




-ರಾಜೇಂದ್ರ ಹುನಗುಂದ.
ಕೊಪ್ಪಳ


9738068449

ಮಂಗಳವಾರ, ಜನವರಿ 3, 2012

ಕಾಲ

ಮಸೂದೆ
ಲೋಕಪಾಲ,
ಆಯಿತು
ದಿಕ್ಕಾಪಾಲ,
ದೇಶ ಈಗ
ಕಂಡವರ ಪಾಲ,
ಈನಡುವೆ ರಾಜ್ಯಕ್ಕೆ
ಆಪತ್ಕಾಲ,
ಮೌನವೊಂದೇ
ನಮಗಿರುವ ಕಾಲ.