ಸೋಮವಾರ, ಅಕ್ಟೋಬರ್ 31, 2011

ಕೆಲವು ಖಾಸಗಿ ಚಾನೆಲ್ (ವಿಶೇಷವಾಗಿ ಸುವರ್ಣ ಚಾನೆಲ್) ಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ಸಮಾಜವನ್ನು ಅಹಿತಗೊಳಿಸುತ್ತಿವೆ. ಜಾತಕ, ರಾಶಿ ಭವಿಷ್ಯಗಳು ಇಂದು ಅಪ್ರಸ್ತುತವೆಂತಲೇ ಹೇಳಬೇಕು. ಅಂತಹ ಕಾರ್ಯಕ್ರಮಗಳು ಇಂದು ಬಹುತೇಕ ಚಾನೆಲ್ ಗಳಲ್ಲಿ ದಿನಕ್ಕೆ ಸತತ ಎರಡು ಘಂಟೆ ಪ್ರಸಾರವಾಗುತ್ತಿವೆ. ಬಹುತೇಕ ಎಲ್ಲ ವರ್ಗದ ಜನರ ಭವಿಷ್ಯವನ್ನು ತಿಳಿಸುವ ಆ ಕಾರ್ಯಕ್ರಮದಲ್ಲಿ ಸತ್ಯಕ್ಕಿಂತ ಹೆಚ್ಚಾಗಿ ಕಪೋಲಕಲ್ಪಿತ ವಿಷಯಗಳು ಪ್ರಸ್ತಾಪಿಸಲಾಗುತ್ತಿದೆ. ವೈಜ್ಞಾನಿಕ ಪ್ರಪಂಚ ಅರಿಯುವ ಕಾಲದಲ್ಲಿ ಇಂತಹ ರಾಶಿ ಭವಿಷ್ಯವನ್ನು ನೆಚ್ಚಿಕೊಳ್ಳಬಹುದೇ ?

ಕೆಲವು ವಾಹಿನಿಗಳಲ್ಲಿ ರಿಯಾಲಿಟಿ ಶೋ ನೆಪದಲ್ಲಿ ಸ್ಪರ್ಧಾಳುಗಳಿಗೆ ಅಸಹನೀಯ ಹಿಂಸೆ ನೀಡಲಾಗುತ್ತಿದೆ. ಇನ್ನು ದಾರವಾಹಿಗಳಲ್ಲಂತೂ ಬರೀ ಗಯ್ಯಾಳಿಗಳ ಮೋಸ, ವಂಚನೆಯ ನಾಟಕೀಯ ಬೆರೆತ ಮಾತುಗಳು. ಮಕ್ಕಳೊಟ್ಟಿಗೆ ಕುಳಿತು ವೀಕ್ಷಿಸುವ ಪಾಲಕರು ಮುಜುಗರ ಪಡದೆ ವಿಧಿಯಿಲ್ಲ ? ಸಾಲದೆಂಬಂತೆ ಒಂದೇ ಕಾರ್ಯಕ್ರಮವನ್ನು ಪದೇ ಪದೇ ಪ್ರಸಾರಿಸುತ್ತಾರೆ. ಇಂತಹ ಪಾತ್ರಗಳನ್ನು ವೈಭವೀಕರಿಸಿ ಚಿತ್ರಿಸಿದರೆ ಸಮಾಜದ ಸ್ವಾಸ್ಥ್ಯ ಏನಾದೀತು. ಕಾರ್ಯಕ್ರಮದ ನಿರೂಪಕರು ಈ ತರಹದ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯಕ್ರಮಗಳನ್ನು ಹೆಚ್ಹೆಚ್ಚು ಪ್ರಸಾರ ಮಾಡಲಿ.

ಶುಕ್ರವಾರ, ಅಕ್ಟೋಬರ್ 28, 2011

ಗೌಡರ ಉಸಾಬರಿ



ದಿಡೀರನೆ ಮಾಧ್ಯಮದ ಎದುರು ಪ್ರತ್ಯಕ್ಸವಾಗಿ ಇಲ್ಲಸಲ್ಲದ ಅಪಾದನೆ ಮಾಡುವುದು ಗೌಡರಿಗೆ ಹೊಸದೇನಲ್ಲ. ತುಂಡು ಗುತ್ತಿಗೆ ಕಾಮಗಾರಿ ಕುರಿತಂತೆ ಅಧಿಕಾರಿಗಳ ಪರ ಮಾತಾಡಲು ಇವರಿಗೆ ನೈತಿಕತೆ ಇದೆಯೇ ? ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆ ನೀಡಲು ನ್ಯಾಯಾಂಗ ಸದೃಢವಾಗಿದೆ.ವಿನಾಕಾರಣ ಜೈಲಿನಲ್ಲಿರುವ ಯಡಿಯೂರಪ್ಪನವರನ್ನು ದೂಷಿಸುವುದು ಎಷ್ಟು ಸರಿ. ಜೈಲಿನಲ್ಲಿದ್ದು ಅವರು ಎಂತ ದ್ವೇಷ ರಾಜಕಾರಣ ಮಾಡಬಲ್ಲರು ಗೌಡರೇ ಹೇಳಬೇಕು. ಅನುಮಾನಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿದರೆ ತಪ್ಪೇನು ? ಆಕ್ರಮ ಯಾರೇ ಮಾಡಿರಲಿ ತಕ್ಕ ಶಿಕ್ಷೆ ಅನುಭವಿಸುತ್ತಾರೆ. ಗೌಡರು ಯಾರ ವಿರುದ್ಧವೋ ತನಿಖೆ ನಡೆದರೆ ಅದಕ್ಕೆ ಜಾತಿ ಲೇಪ ಕಟ್ಟಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದರೆ ಯುದ್ಧ ಆರಂಭವಾಗಿದೆ ಅನ್ನುವ ಗೌಡರ & ಅಧಿಕಾರಿಗಳ ಸಂಬಂಧವನ್ನು ಎನ್ನನ್ನಬೇಕು. ಬಹುಶಃ ತಾವು ಜೈಲಿಗೆ ಹೋಗುವ ಭೀತಿ ಗೌಡರಿಗೆ ಇರಲಿಕ್ಕೆ ಸಾಕು. ತಾವು ತಪ್ಪು ಮಾಡಿಲ್ಲ ಅನ್ನೋದಾದರೆ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ತಮಗೆ ಉಸಾಬರಿ ಏಕೆ ?. ನಾನು ಮಾಡಿರುವ ಕೆಲಸಕ್ಕೆ ಮನ್ನಣೆ ಸಿಗುತ್ತದೆ ಅಂತ ಹೇಳುವ ಅವರು ರಾಜ್ಯಕ್ಕೆ ತಾವು ಮಾಡಿರುವ ಕೆಲಸವನ್ನು ಒಮ್ಮೆ ರಾಜ್ಯದ ಜನತೆ ಮುಂದೆ ಅವಲೋಕಿಸುವುದು ಒಳ್ಳೆಯದಲ್ಲವೇ ?



ಮಂಗಳವಾರ, ಅಕ್ಟೋಬರ್ 18, 2011

ಭಟ್ಟರೇ ಸ್ವಲ್ಪ ಯೋಚಿಸಿ – ಇನ್ನಾದರು ಒಳ್ಳೆ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿ…


ಸಿನಿಮಾದಂತ ಪ್ರಭಾವಿ ಮಾಧ್ಯಮವನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬಳಸಿ ಯುವಜನತೆಯ ಅಭಿರುಚಿಯನ್ನು ಮತ್ತಷ್ಟು ಕೆಳಕ್ಕೆ ತಳ್ಳುವ ಪ್ರಯತ್ನ ಯೋಗರಾಜ್ ಭಟ್ಟರು ಮಾಡುತ್ತಿದ್ದಾರೆ. ಒಂದು ಸಿನಿಮಾ ಅಂದರೆ ಬರೀ ಪಡ್ಡೆ ಹೈಕಳುಗಳನ್ನು ಸಿನಿಮಾ ಮಂದಿರಗಳಿಗೆ ಎಳೆತರುವ ಮತ್ತು ಹಣ ಗಳಿಸುವುದು ಅಂತಲೇ ಭಟ್ಟರು ತಿಳಿದಂತಿದೆ.
ನಮ್ಮ ಯೋಗರಾಜ್ ಭಟ್ಟರು ಸಾಹಿತ್ಯದ ಹೆಸರಲ್ಲಿ ಗುರುಗಳಿಗೆ, ಪೋಷಕರಿಗೆ ಅವಮಾನಕರ ಶಬ್ದಗಳನ್ನು ಬಳಸುತ್ತಿದ್ದಾರೆ. ಅವರ ಲೇಖನಿಯಿಂದ ಹೊಮ್ಮಿದ ಕೆಲವು ಪದಗಳು ಹೀಗಿವೆ, ಹೈಯಸ್ಟ್ ಮಾರ್ಕ್ಸ್ ಕೊಟ್ಟವನೇ ಲೂಸು, ನಮ್ಮಪ್ಪ ಪುಣ್ಯಾತ್ಮ ಅಂತ ಹೀಯಾಳಿಸುವುದು, ಇನ್ನೊಂದು ಹುಡುಗಿಯ ಫೋನ್ ನಂಬರ್ ಇಟ್ಕೊಂಡಿರು ಅಂತ ಹೇಳುವುದು, ಸಿನಿಮಾಗಳಿಂದ ಪ್ರೇರಿತರಾಗುವ ನಮ್ಮ ಯುವಕರು ಇಂತ ಉತ್ತೇಜಕ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಧೋಗತಿ. ಹಾಡಿನ ಕೊನೆಯಲ್ಲಾದರು ನೀತಿ ಬೋಧದ ಮಾತು ಬೇಡವೇ.? ಭಟ್ಟರ ಸಿನಿಮಾಗಳೆಂದರೆ ಕೇವಲ ಕಾಲೇಜು ಮತ್ತು ಪಡ್ಡೆ ಗುಂಪಿಗೆ ಮಾತ್ರ ಮೀಸಲು ಅನ್ನುವ ರೀತಿಯಲ್ಲಿ ಬಿಂಬಿತವಾಗುತ್ತಿವೆ. ಪೋಷಕರು, ಹಿರಿಯರಿಗೆ ಅಂತ ಭಟ್ಟರು ಏನು ಕೊಡುಗೆ ಕೊಡಬಲ್ಲರು? ಮನೋರಂಜನೆ ಅಂದರೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಮೀಸಲೇ,? ಭಟ್ಟರು ಇನ್ನಾದರು ಒಳ್ಳೆ ಸಿನಿಮಾಗಳನ್ನು ನಿರ್ದೇಶಿಸಲಿ.